image_pdfimage_print

ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೊಲಗಬೇಕಾದ ಕಾಲ ಬಂದಿದೆ ಎಂಬ ಅರ್ಥ ಬರುವಂತೆ ಶ್ರೀ ನಂದನ್‌ ನಿಲೇಕಣಿಯವರು ಹೇಳಿದ್ದಾರೆ. ಅವರ ಮಾತನ್ನು ಪತ್ರಿಕೆಗಳ ಮೂಲಕ ಓದಿದ ನನಗೆ ಅನ್ನಿಸಿದ್ದಿಷ್ಟು:

  • ಬಾಲ್ಯದಿಂದಲೂ ಸಾರ್ವಜನಿಕ ಬದುಕಿನಲ್ಲೇ ಬೆಳೆದಿದ್ದರಿಂದ ನನಗೆ ಅಧಿಕಾರದ, ಸರ್ಕಾರದ ಸಂಪರ್ಕ ಬಂತು. ಕಾರ್ಪೋರೇಟ್‌ ಸಂಸ್ಥೆಯಲ್ಲಿ ದುಡಿದು ಬೆಳೆಯುವ ಅದೃಷ್ಟ ನನಗಿರಲಿಲ್ಲ. ಆದರೆ ಸಮಾಜಸೇವೆಯೇ ನಮ್ಮೆಲ್ಲರ ಆದ್ಯ ದುಡಿಮೆ ಆಗಬೇಕು ಎಂದು ಹೇಳುತ್ತಿದ್ದ ನನ್ನ ತಾಯಿಯ ಕೆಳಗೆ ಬೆಳೆಯುವ ದೇವದುರ್ಲಭ ಅದೃಷ್ಟ ನನಗೆ ಒದಗಿದ ಬಗ್ಗೆ ನನಗೆ ಅತೀವ ಸಂತೋಷವಿದೆ.
  • ನಾನು ಸಾಮಾಜಿಕ ಸೇವೆಯ ಕುಟುಂಬದಲ್ಲಿ ಬೆಳೆದು ವಿದ್ಯಾರ್ಥಿ ದೆಸೆಯಿಂದಲೂ ಸಾರ್ವಜನಿಕ ಬದುಕಿನಲ್ಲೇ ಮೇಲೆ ಬಂದವನು. ಜನರೊಂದಿಗೆ ಬೆರೆತು, ಅವರಿಂದಲೇ ಆಯ್ಕೆಯಾಗಿ ಸರ್ಕಾರದ ಸೇವೆಗೆ ಅವಕಾಶ ದೊರೆತು ಕೇಂದ್ರ ಸಚಿವನಾಗಿದ್ದೆ. ಗಮನಿಸಿ: ಖಾಸಗಿ ಹುದ್ದೆಯಿಂದ ಸರ್ಕಾರದ ಸೇವೆಗೆ ಜಿಗಿದು ಆಮೇಲೆ ಸಾರ್ವಜನಿಕ ಸೇವೆಗೆ ಬಂದು `ನಾನು ಸಮಾಜಸೇವಕ’ ಎಂದು ವಾದಿಸುವ ಕ್ಷುದ್ರ ಚಿಂತನೆ ನನಗಿಲ್ಲ!
  • ನಾನು ಖಾಸಗಿ ಸಂಸ್ಥೆಗಳನ್ನು ಕಟ್ಟಿಲ್ಲ, ನಿಜ; ಆದರೆ ಸಾರ್ವಜನಿಕ ಚಳವಳಿಗಳನ್ನು, ಸಂಘಟನೆಗಳನ್ನು ಕಟ್ಟಿದ್ದೇನೆ; ಬೆಳೆಸಿದ್ದೇನೆ.ನನ್ನ ಎಲ್ಲ ಸಾರ್ವಜನಿಕ ಸೇವಾ ಚಟುವಟಿಕೆಗಳಿಗೆ ಸಾರ್ವಜನಿಕರ ನೆರವನ್ನೇ ಪಡೆದಿದ್ದೇನೆ.
  • ಚಳವಳಿ, ಪ್ರತಿಭಟನೆ, ಉಪವಾಸ ಮುಷ್ಕರ, ಧರಣಿ, ಹೋರಾಟ. ಆಂದೋಳನ, ಪಾದಯಾತ್ರೆ, ಮನೆ ಮನೆ ಸಂಪರ್ಕ, – ಈ ಯಾವುದನ್ನೂ ಮಾಡದೆ ಜನರ ನೋವನ್ನು ಅರಿಯುವುದಾಗಲೀ, ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಲೀ, ಭಾರತದಂಥ ಪ್ರಜಾತಾಂತ್ರಿಕ ದೇಶದಲ್ಲಿ ವ್ಯರ್ಥ ಚಿಂತನೆ. ಕಾಂಗ್ರೆಸ್‌ ದುರಾಡಳಿತ ಕರಾಳ ಕಾಲಾವಧಿಯಾದ ತುರ್ತುಪರಿಸ್ಥಿತಿಯನ್ನು ಅಂದೇ ಹದಿಹರೆಯದವನಾಗಿ ಪ್ರತಿಭಟಿಸಿದ್ದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ಬದುಕು ಜನಪರ ಚಳವಳಿಯಲ್ಲೇ ಬೆಸೆದುಕೊಂಡು ಬಂದಿದೆ. ಆದ್ದರಿಂದ ನನ್ನ ಕಾಂಗ್ರೆಸ್‌ ವಿರುದ್ಧದ ಹೋರಾಟಕ್ಕೆ 38 ವರ್ಷಗಳ ಇತಿಹಾಸವಿದೆ. ಈ ಚುನಾವಣೆಯು ನನ್ನ ಹೋರಾಟದ ಮುಂದುವರಿಕೆಯ ಇನ್ನೊಂದು ಹೆಜ್ಜೆ ಅಷ್ಟೆ.
  • ದೇಶದ ಸಮಸ್ಯೆಗಳನ್ನು ಉನ್ನತ ಅಧಿಕಾರದ ದೆಸೆಯಿಂದ ಮೇಲಿನಿಂದ ನೋಡಿ ತಿಳಿಯುವ ಜನರಿಗಿಂತ, ತಳಮಟ್ಟದಲ್ಲಿ ಓಡಾಡಿ ಅರಿತು ಮೇಲಿನ ಹಂತ ತಲುಪಿದವರೇ ವಾಸ್ತವತೆಯನ್ನು ಬಲ್ಲವರಾಗಿರುತ್ತಾರೆ. ಅಂಥ ಅರ್ಹತೆ, ಅನುಭವ ನನಗಿದೆ ಎಂದು ನಮ್ರವಾಗಿ ಹೇಳಬಲ್ಲೆ. ರಾಜ್‌ ನಹೀ ಸಮಾಜ್‌ ಬದಲ್‌ನಾ (ರಾಜನಿಗಿಂತ ಮೊದಲು ಸಮಾಜ ಬದಲಾಗಬೇಕು) ಎಂಬ ನಾಣ್ಣುಡಿಯನ್ನು ಸಾಮಾಜಿಕ ಸೇವೆ ಕಲಿಸಿದ ಹಿರಿಯರು ಸದಾ ಹೇಳುತ್ತಿರುತ್ತಾರೆ. ಅದನ್ನೇ ನಾನು ಜೀವನದುದ್ದಕ್ಕೂ ಪಾಲಿಸಿದ್ದೇನೆ.
  • ಕೊನೆಯದಾಗಿ, ನಾನು ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾಗವಹಿಸುತ್ತಿರುವುದು ನನ್ನ ಕಾಲೇಜು ದಿನಗಳ ವಿದ್ಯಾರ್ಥಿ ನಾಯಕತ್ವದ ಅರ್ಹತೆಯಿಂದಲೇ ಹೊರತು, ಸರ್ಕಾರಿ ಕೃಪಾಪೋಷಿತ ಹುದ್ದೆಯ ಪ್ರಭಾವದಿಂದಲ್ಲ! ಆದ್ದರಿಂದ ನನ್ನ ಪಕ್ಷದ ನಿಷ್ಠೆಗೆ ನನ್ನ ಸಂಪೂರ್ಣ ಸಾರ್ವಜನಿಕ ಬದುಕಿನ ಹಿನ್ನೆಲೆ ಇದೆ. ` ಮೊದಲು ದೇಶ, ನಂತರ ಪಕ್ಷ, ಕೊನೆಗೆ ವ್ಯಕ್ತಿ’ ಎಂಬ ನೀತಿಯನ್ನೇ ನಾನು, ನನ್ನ ಪಕ್ಷದ ಕಾರ್ಯಕರ್ತರು ಅನುಸರಿಸಿದ್ದೇವೆ. ನಾನು ಎಂದರೆ ಇಲ್ಲಿ ನಾನಲ್ಲ, ನೀವೇ, ಜನರೇ…
    ಆದ್ದರಿಂದ ನನ್ನ ನಿಲುವು ಸ್ಪಷ್ಟ: ಈಗ ತೊಲಗಬೇಕಿರುವುದು ನಾನಲ್ಲ; ದುರಾಡಳಿತವೇ ಮೈವೆತ್ತ ಕಾಂಗ್ರೆಸ್ ಮತ್ತು ಅದನ್ನೇ ಒಂದು ಮಹಾನ್‌ ಸಾಧನೆ ಎಂದು ಬಿಂಬಿಸುವ ವ್ಯಕ್ತಿಗಳು. ಆ ಕಾಲ ಈಗ ಒದಗಿದೆ.