image_pdfimage_print

* ಆರೋಗ್ಯ ಚೇತನ, ಅದಮ್ಯ ಚೇತನದ ಒಂದು ವಿಶಿಷ್ಟ ಯೋಜನೆ. ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿರುವ ಈ ಯೋಜನೆಯು ನಮ್ಮ ಮಧ್ಯಾಹ್ನದ ಬಿಸಿಯೂಟ ಯೋಜನೆ ‘ಅನ್ನಪೂರ್ಣಾ’ದ ವ್ಯಾಪ್ತಿಗೆ ಬರುವ ಎಲ್ಲ ಮಕ್ಕಳನ್ನೂ ಒಳಗೊಳ್ಳುತ್ತದೆ. ಈ ಮಕ್ಕಳು ಸಮಾಜದ ಸೌಲಭ್ಯವಂಚಿತ ವಿಭಾಗಕ್ಕೆ ಸೇರಿದವರಾಗಿದ್ದು, ತಿಳುವಳಿಕೆ, ಹಣ ಹಾಗೂ ಆರೋಗ್ಯ ಸೇವೆಗಳನ್ನು ಹೊಂದುವ ನಿಟ್ಟಿನಲ್ಲಿ ಆತ್ಮವಿಶ್ವಾಸದ ಕೊರತೆಗಳಿಂದಾಗಿ ಆರೋಗ್ಯ ಸವಲತತುಗಳಿಂದ ದೂರವುಳಿದಿದ್ದಾರೆ. ಆರೋಗ್ಯ ಚೇತನವು ಅವರ ಈ ಅಂತರವನ್ನು ತುಂಬುವ ಪ್ರಯತ್ನ ಮಾಡುತ್ತಿದೆ.

* ಮಕ್ಕಳು ಅಪೌಷ್ಟಿಕತೆ, ಪ್ರತಿರೋಧಕ ಶಕ್ತಿಯ ಕೊರತೆಯಿಂದಾಗಿ ಉಂಟಾಗುವ ಸೋಂಕುಗಳು (ವಿಶೇಷತಃ ಉಸಿರಾಟದ ಸೋಂಕುಗಳು), ಚರ್ಮ, ಹಲ್ಲು, ಮೂಳೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳಿಂದ ನರಳುತ್ತಿದ್ದಾರೆ.

* ತಂಡ ಮತ್ತು ಅದರ ಪಾತ್ರ: ಆರೋಗ್ಯ ಚೇತನವು ವೈದ್ಯರ ತಂಡವೊಂದನ್ನು ಹೊಂದಿದ್ದು, ಈ ವೈದ್ಯರು ಶಾಲೆಗಳಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಇದು ಮಕ್ಕಳಿಗೆ ಯಾವ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಯಲು ಸಹಕಾರಿ. ಚಿಕ್ಕಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಉಳಿದಂತೆ ನಮ್ಮ ಸಹಯೋಗಿ ಆಸ್ಪತ್ರೆಗಳು ಅಥವಾ ವೈದ್ಯರುಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗುತ್ತದೆ. ಮಕ್ಕಳ ಎತ್ತರ ಹಾಗೂ ತೂಕ ಪರೀಕ್ಷಿಸಿ ದಾಖಲಿಸುವಲ್ಲಿ ಆಯಾ ಶಾಲಾಶಿಕ್ಷಕರು ಸಹಕಾರ ನೀಡುತ್ತಾರೆ. ಅವರು ನೀಡುವ ಕಾಲಾನುಕ್ರಮದಲ್ಲಿ ಮಕ್ಕಳ ಆರೋಗ್ಯ ಸ್ಥಿತಿಯ ವಿವರ ಹಾಗೂ ಅವರ ಕೌಟುಂಬಿಕ ಹಿನ್ನೆಲೆಯೇ ಮೊದಲಾದ ಮಾಹಿತಿಗಳು ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ವೈದ್ಯರಿಗೆ ಉಪಯುಕ್ತವಾಗಿ ಪರಿಣಮಿಸುತ್ತವೆ.

* ಆರೋಗ್ಯ ಚೇತನವು ಈ ಮಕ್ಕಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಕರಿಸುತ್ತದೆ. ನಮ್ಮ ಸಹಯೋಗಿ ವೈದ್ಯರು ಹಾಗೂ ಆಸ್ಪತ್ರೆಗಳು ಅಗತ್ಯ ಬಿದ್ದಾಗ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಮಕ್ಕಳಿಗೆ ಚಿಕಿತ್ಸೆ ನೀಡಲು ಮುಂದಾಗುತ್ತಾರೆ. ಆರೋಗ್ಯ ಚೇತನ ತಂಡವು ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಲಹೆ ನೀಡುವುದರ ಜೊತೆಗೆ, ಆಯಾ ಸಂದರ್ಭದಲ್ಲಿ ಚಿಕಿತ್ಸೆಯ ಅಗತ್ಯಕ್ಕೆ ತಕ್ಕಂತೆ ಉಪಕಾರಿ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುತ್ತವೆ ಮತ್ತು ಸಂಪೂರ್ಣ ಪ್ರಕ್ರಿಯೆ ಮುಗಿಯುವವರೆಗೂ ಜೊತೆಗಿದ್ದು ಬೆಂಬಲ ನೀಡುತ್ತದೆ.

* ಮಕ್ಕಳಿಗಾಗಿ ಆರೋಗ್ಯ ವಿಮೆ: ಕರ್ನಾಟಕ ಸರ್ಕಾರವು ಬಡಜನರಿಗೆ ಆರೋಗ್ಯ ವಿಮೆಯ ಅಗತ್ಯವನ್ನು ಮನಗಂಡು, ೨೦೦೪ರಲ್ಲಿ ಕರ್ನಾಟಕ ಇಂಟಿಗ್ರೇಟೆಡ್‌ ಹೆಲ್ತ್‌ ಪಾಲಿಸಿಯಲ್ಲಿ ಅದನ್ನು ನಮೂದಿಸಿತ್ತು. ಅದಮ್ಯ ಚೇತನವು ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪೆನಿ ಲಿಮಿಟೆಡ್‌ ಅಡಿಯಲ್ಲಿ ಸುಮಾರು ೧೦,೦೦೦ ಮಕ್ಕಳಿಗೆ ವಿಮೆ ಸೌಲಭ್ಯ ಕಲ್ಪಿಸಿದೆ. ಇದರ ಕಂತುಗಳನ್ನು ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ದಾನಿಗಳು ಪಾವತಿಸುತ್ತಾರೆ. ಹೇಗಾದರೂ ಸರಿ, ಪೋಷಕರು ಈ ಆರೋಗ್ಯ ಕಾಳಜಿ ಯೋಜನೆಯಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯ ಎಂದು ನಾವು ನಂಬಿದ್ದೇವೆ. ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಮಕ್ಕಳೂ ಇದರ ವ್ಯಾಪ್ತಿಯಲ್ಲಿ ಒಳಗೊಳ್ಳುವಂತೆ ವಿಸ್ತರಿಸಲಿದ್ದೇವೆ. ಈ ಯೋಜನೆಗೆ ಹೆಚ್ಚಿನ ದೇಣಿಗೆ ನೀಡುವ ಶಾಲೆಗಳಿಗೆ ಸಬ್ಸಿಡಿ ದೊರಕಿಸಿಕೊಡುವ ಮೂಲಕ ನಾವು ಶಾಲೆಗಳ ಪಾಲ್ಗೊಳ್ಳುವಿಕೆಯನ್ನೂ ಉತ್ತೇಜಿಸುತ್ತಿದ್ದೇವೆ. ಹಲವಾರು ಶಾಲೆಗಳು ಸೌಲಭ್ಯವಂಚಿತ ಮಕ್ಕಳ ಪ್ರೀಮಿಯಮ್ ಪಾವತಿಸಲು ಮುಂದಾಗಿದ್ದಾರೆ.
* ಅಪಘಾತ ವಿಮೆ: ಕರ್ನಾಟಕ ಸರ್ಕಾರವು ಎಲ್ಲ ಮಕ್ಕಳನ್ನೂ ಅಪಘಾತ ವಿಮಾ ವ್ಯಾಪ್ತಿಗೆ ಒಳಪಡಿಸಿದೆ. ಆಧರೆ ಮಾಹಿತಿ ಕೊರತೆಯಿಂದಾಗಿ ಪೋಷಕರಿಗೆ ಈ ವಿಷಯ ತಿಳಿದಿರುವುದಿಲ್ಲ. ಅದಮ್ಯ ಚೇತನವು ಆರೋಗ್ಯ ಚೇತನದ ಅಡಿಯಲ್ಲಿ ಮಕ್ಕಳಿಗೆ ಈ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ.