Think Nation First, Act Nation First, Make Nation First

Home > About Ananth > ನಾಯಕ, ಮಿತ್ರ, ಕಾಯಕಜೀವಿ

ನಾಯಕ, ಮಿತ್ರ, ಕಾಯಕಜೀವಿ

ಅನಂತಕುಮಾರ್. ಭಾರತದ ಆಧುನಿಕ ಚಿಂತಕ. ಭಾರತವನ್ನು ಭವ್ಯದೇಶವಾಗಿಸುವ ಹಂಬಲ ಹೊತ್ತ ನಾಯಕ. ಒಡಲೊಳಗೆ ಬದಲಾವಣೆಯ ಅಗ್ನಿಸ್ಫೂರ್ತಿ. ಎಲ್ಲ ಪಂಥಾಹ್ವಾನಗಳನ್ನು ಎದೆಗುಂದದೆ ಎದುರಿಸುವ ಛಾತಿ.

ಇಪ್ಪತ್ತೊಂದು ವರ್ಷಗಳ ರಾಜಕೀಯ ಬದುಕಿನಲ್ಲಿ ಅನಂತಕುಮಾರ್ ಸಮಾಜದ ಸುಖದುಃಖದಲ್ಲಿ ಸಮಭಾಗಿಯಾಗಿದ್ದಾರೆ. ಹತ್ತ ಹಲವು ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಿಭಿನ್ನ ರಂಗಗಳಲ್ಲಿ ಕೇಂದ್ರ ಸಚಿವರಾಗಿ ಮಂತ್ರಿಸ್ಥಾನದ ಘನತೆಯನ್ನೂ ಹೆಚ್ಚಿಸಿದ್ದಾರೆ; ವಿಶಿ ಸಾಧನೆಗಳಿಗೂ ಕಾರಣರಾಗಿದ್ದಾರೆ. ಐವತ್ತು ವರ್ಷಗಳಲ್ಲಿ ಹಿಂದಿನವರು ಮಾಡಲಾಗದ ಬದಲಾವಣೆಗಳನ್ನು ಆರೇ ವರ್ಷಗಳಲ್ಲಿ ತಂದಿದ್ದಾರೆ. ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ನಗರಾಭಿವೃದ್ಧಿ, – ಖಾತೆ ಯಾವುದೇ ಇರಲಿ, ಮಂತ್ರ ಅದೇ: ಪ್ರತೀ ಭಾರತೀಯನೂ ಹೆಮ್ಮೆ ಪಡುವಂಥ ಅಭ್ಯುದಯದ ಹೆಜ್ಜೆಗುರುತುಗಳನ್ನು ಅನಂತಕುಮಾರ್ ಮೂಡಿಸಿದ್ದಾರೆ.

ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಅನಂತಕುಮಾರ್ ವಿಶ್ವದ ಭೂಪಟದಲ್ಲಿ ಭಾರತವು ಮಿರುಗುವಂತೆ ಮಾಡಿದರು. ತಾಜಾ ವಿನೂತನ ಚಿಂತನೆಯ ತಂಗಾಳಿ, ಗಟ್ಟಿ ಗೆಲುವಿನ ಕಾರ್ಯತಂತ್ರದ ಬಿರುಸು, – ಹೀಗೆ ಅನಂತಕುಮಾರ್ ಭಾರತದ ಅಸಂಖ್ಯ ಮನೆಮನಗಳಲ್ಲಿ ತನ್ನದೇ ಛಾಪು ಬಿಂಬಿಸಿದ್ದಾರೆ.

ಮೌಲ್ಯಗಳೇ ಅನಂತಕುಮಾರ್ ಕಾಯಕದ ಮೂಲಸೆಲೆ. ಶ್ರೀ ವಾಜಪೇಯಿ, ಶ್ರೀ ಅಡ್ವಾಣಿಜಿಯಂಥ ಮುತ್ಸದ್ದಿಗಳ ಆಶೀರ್ವಾದ, ಪಕ್ಷದ ಕಾರ್ಯಕರ್ತರ, ಹಿತೈಷಿಗಳ ಮತ್ತು ಸ್ನೇಹಿತರ ಬಲಿ? ತಂಡದ ಬೆಂಬಲ, – ಅನಂತಕುಮಾರ್ ವ್ಯಕ್ತಿಯಲ್ಲ, ಸಮಾಜಪ್ರಿಯರ, ಅಭಿವೃದ್ಧಿ ಚಿಂತಕರ ಪ್ರತಿನಿಧಿ. ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂರವರು ಕಾಣುತ್ತಿರುವ ಬಲಿಷ್ಠ ಭಾರತದ ಕನಸನ್ನು ನಿಜಗೊಳಿಸುವ ದಿಟ್ಟ ಯತ್ನದಲ್ಲಿ ಸದಾ ಮಗ್ನರಾದ ಕ್ರಿಯಾಶೀಲ ರಾಜಕಾರಣಿ.

ದಕ್ಷ ಸಂಘಟಕರೆಂದೇ ಪ್ರಸಿದ್ಧರಾದ ಅನಂತಕುಮಾರ್ ಜನತೆಯನ್ನು ರಾಷ್ಟ್ರೀಯ ದೃಷ್ಟಿಕೋಣದತ್ತ ಸೆಳೆಯುತ್ತಾರೆ; ಈ ಎಲ್ಲ ಆಶೋತ್ತರಗಳು ನಿಜವಾಗುವುದಕ್ಕಾಗಿ ಶ್ರಮಿಸುತ್ತಾರೆ. ಅವರ ವ್ಯಕ್ತಿತ್ವವೇ ಹಾಗೆ: ನೇರ ವರ್ತನೆ, ನಸುನಗು, ಸಂದರ್ಭಕ್ಕೆ ತಕ್ಕ ನಗೆಚಟಾಕಿ. ಮರುಕ್ಷಣವೇ ದೇಶಕಾರ್ಯದ ಜಾಗೃತಿಯ ಕಿವಿಮಾತು. ಅವರ ರಾಜಕೀಯ ಸ್ಪರ್ಧಿಗಳೂ ಮೆಚ್ಚುವ ನಡೆ,ನುಡಿ.

ಲೋಕನಾಯಕ ಜಯಪ್ರಕಾಶ್ ನಾರಾಯಣರ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅನಂತಕುಮಾರ್ ಆಗಷ್ಟೆ ಕಾನೂನು ಪದವೀಧರ. ಅನಂತಕುಮಾರರ ರಚನಾತ್ಮಕ ರಾಜಕೀಯ ಬದುಕು ಮೂರೂವರೆ ದಶಕ ದಾಟಿ ಮುನ್ನಡೆದಿದೆ.

Copyright © 2009 www.ananth.org All Rights Reserved. Powered by Dhyeya Tech