ತೇಜಸ್ವಿನಿ ಅನಂತಕುಮಾರ್
ಕಿರು ಪರಿಚಯ
ಕಳೆದ ಹನ್ನೊಂದು ವರ್ಷಗಳಿಂದ ಅದಮ್ಯ ಚೇತನ ಸಂಸ್ಥೆಯ ಮೂಲಕ ಪರಿಚಿತರಾಗಿರುವ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ವಿಷಯತಜ್ಞತೆ ವಿಜ್ಞಾನ-ಸಂಶೋಧನೆ. ಏರೋನಾಟಿಕಲ್ ಡೆವೆಲಪ್‌ಮೆಂಟ್ ಏಜೆನ್ಸಿಯಲ್ಲಿ ವಿಜ್ಞಾನಿಯಾಗಿದ್ದ ಅವರು ಅದಮ್ಯ ಚೇತನದ ಸ್ಥಾಪಕ ಅಧ್ಯಕ್ಷೆಯಾಗಿ ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಿಂದ ಎಲೆಕ್ಟ್ರಾನಿಕ್ಸ್ ಇಂಜಿಯರಿಂಗ್ ಪದವಿ ಪಡೆದ ತೇಜಸ್ವಿನಿಯವರು ಇದೀಗ ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ.
ಅಮೃತಾ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್ಮೆಂಟ್ ಸೈನ್ಸಸ್ ಕಾಲೇಜನ್ನು ನಡೆಸುತ್ತಿರುವ ನಾಲೆಜ್ ಪಾರ್ಕ್ ಆಫ್ ಇಂಡಿಯಾದ ಟ್ರಸ್ಟಿಯಾಗಿರುವ ಶ್ರೀಮತಿ ತೇಜಸ್ವಿನಿಯವರು ದಿನವೂ ಸಾಮಾಜಿಕ ಚಟುವಟಿಕೆಗಳಲ್ಲೇ ಹೆಚ್ಚು ಬಾಗಿಯಾಗುತ್ತಾರೆ.
ಶ್ರೀಮತಿ ತೇಜಸ್ವಿನಿಯವರ ಪತಿ ಶ್ರೀ ಅನಂತಕುಮಾರ್ ಲೋಕಸಭಾ ಸದಸ್ಯರು ಮತ್ತು ಮಾಜಿ ಕೇಂದ್ರ ಸಚಿವರು. ಐಶ್ವರ್ಯಾ ಮತ್ತು ವಿಜೇತಾ – ಅವರ ಮಕ್ಕಳು.
ಶ್ರೀಮತಿ ತೇಜಸ್ವಿನಿಯವರ ನಿರಂತರ ಭಾಗಿತ್ವ ಮತ್ತು ಮಾರ್ಗದರ್ಶನದಲ್ಲಿ ಅದಮ್ಯ ಚೇತನ ಸಂಸ್ಥೆಯು ಈಗ ಹತ್ತು ಆಯಾಮಗಳಲ್ಲಿ ಸಾಮಾಜಿಕ ಸೇವೆಗಳನ್ನು ಮಾಡುತ್ತಿದೆ. ಸಂಸ್ಥೆಯು ಈಗ ಹುಬ್ಬಳ್ಳಿ, ಗುಲಬರ್ಗಾ, ಜೋಧಪುರಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಅನ್ನಪೂರ್ಣ
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಕೆಲವೇ ಸ್ವಯಂಸೇವಾ ಕಾರ್ಯಕರ್ತರೊಂದಿಗೆ ೨೦೦೩ರ ಜೂನ್ ೨೩ರಂದು ಮಧ್ಯಾಹ್ನದೂಟ ವ್ಯವಸ್ಥೆಯನ್ನು ಆರಂಭಿಸಿದರು. ೨.೫ ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನವೂ ಶುಚಿ ರುಚಿ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರದ ನೆರವಿನೊಂದಿಗೆ ಪ್ರತಿದಿನವೂ ತಲುಪಿಸುತ್ತಿರುವ ಅದಮ್ಯ ಚೇತನ ಸಂಸ್ಥೆಯು ದೇಶದ ಮುಂಚೂಣಿ ಸಾಮಾಜಿಕ ಸೇವಾ ಸಂಸ್ಥೆಯಾಗಿ ರೂಪುಗೊಂಡಿದೆ. ಅನ್ನಪೂರ್ಣದ ಮೂಲಕ
- ಬೆಂಗಳೂರಿನ ೩೬೨ ಶಾಲೆಗಳ ೮೦ ಸಾವಿರ ಶಾಲಾಮಕ್ಕಳು
- ಹುಬ್ಬಳ್ಳಿಯ ೨೭೦ ಶಾಲೆಗಳ ೭೦ ಸಾವಿರ ಶಾಲಾಮಕ್ಕಳು
- ರಾಜಸ್ಥಾನದ ಜೋಧಪುರ ಜಿಲ್ಲೆಯ ೪೧೬ ಶಾಲೆಗಳ ೬೫ ಸಾವಿರ ಶಾಲಾಮಕ್ಕಳು
- ಗುಲಬರ್ಗಾದ ೧೨ ಸಾವಿರ ಶಾಲಾಮಕ್ಕಳು ಪ್ರತಿದಿನವೂ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುತ್ತಿದ್ದಾರೆ
ಆರೋಗ್ಯ ಚೇತನ
ಶಾಲಾ ಮಕ್ಕಳ ಊಟದ ಜೊತೆಗೇ ಅವರೆಲ್ಲರ ಆರೋಗ್ಯದತ್ತಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಕನಸಿನ ಫಲವಾಗಿ ಈಗ ಅದಮ್ಯ ಚೇತನವು ದೇಶದಲ್ಲೇ ವಿಶಿಷ್ಟವಾದ ‘ಆರೋಗ್ಯ ಚೇತನ’ ಮಕ್ಕಳ ವಿಮೆ ಕಾರ್ಯಕ್ರಮವನ್ನು ರೂಪಿಸಿದೆ. ಭಾರತರತ್ನ, ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರವರು ೨೦೦೮ರ ಜನವರಿಯಲ್ಲಿ ಆರೋಗ್ಯ ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನ್ಯೂ ಇಂಡಿಯಾ ಆಶೂರೆನ್ಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ವಿಶಿಷ್ಟ ಯೋಜನೆಯಲ್ಲಿ ಪ್ರತಿಯೊಬ್ಬ ಶಾಲಾವಿದ್ಯಾರ್ಥಿಯು ವರ್ಷಕ್ಕೆ ಕೇವಲ ೩೫ ರೂ. ಶುಲ್ಕ (ಪ್ರೀಮಿಯಂ ಹಣ) ಪಾವತಿ ಮಾಡಿದರೆ ಸಾಕು. ಅವರಿಗೆ ಆ ವರ್ಷ ೧೦ ಸಾವಿರ ರೂ.ವರೆಗಿನ ಔಷಧ, ಪ್ರಯೋಗಾಲಯ ಶುಲ್ಕ, ವೈದ್ಯರ ಶುಲ್ಕ, ಆಸ್ಪತ್ರೆಯ ವಸತಿ ವೆಚ್ಚಗಳು ಸಂಪೂರ್ಣ ಉಚಿತವಾಗಿ ದೊರಕುತ್ತದೆ. ಈ ವಿಮೆಯ ಮೂಲಕ ಬೆಂಗಳೂರಿನ ೪೩೩, ರಾಜ್ಯದ ೧೭೦೦ ಹಾಗೂ ದೇಶದ ೪೦೦೦ಕ್ಕೂ ಹೆಚ್ಚು ಸುಸಜ್ಜಿತ – ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮಕ್ಕಳು ಚಿಕಿತ್ಸೆ ಪಡೆಯಬಹುದು.
ಆಟ – ಪಾಠ
ಶಾಲಾ ಪಾಠಗಳ ದೃಶ್ಯನಿರೂಪಣೆಯ ಕಲಿಕೆ
ಮಕ್ಕಳು ಪಠ್ಯಪುಸ್ತಕಗಳಲ್ಲಿ ಕೊಟ್ಟ ಕಥೆ – ಕವನಗಳನ್ನು ಓದಲು, ವಿಜ್ಞಾನ ಪ್ರಯೋಗಗಳನ್ನು ಅರ್ಥ ಮಾಡಿಕೊಳ್ಳಲು ಈ ಪ್ರಕಲ್ಪ ನೆರವಾಗಿದೆ. ಇದಕ್ಕಾಗಿಯೇ ಒಂದರಿಂದ ಏಳನೇ ತರಗತಿವರೆಗಿನ ತರಗತಿಗಳ ಹಾಡುಗಳ ಆಡಿಯೋ ಕ್ಯಾಸೆಟ್ – ಸಿಡಿಗಳಿವೆ. ಹಾಡು, ನೃತ್ಯ, ಆಟ, ನಾಟಕಗಳ ಮೂಲಕ ಪಾಠ ಕಲಿಯುವ ಈ ಬಗೆ ವಿಶಿಷ್ಟ.
ಸರ್ಕಾರಿ ಶಾಲಾ ಮಕ್ಕಳ ಮನ ಗೆದ್ದಿರುವ ಈ ಯೋಜನೆಯ ಹಿಂದೆ ಸಮಗ್ರ ತಯಾರಿಯೇ ಇದೆ. ಅದಮ್ಯ ಚೇತನದ ಕಾರ್ಯಕರ್ತೆಯರು ಆಟ – ಪಾಠ ನಡೆಯುವ ಎಲ್ಲ ತರಗತಿಗಳ ಎರಡು ದಿನಗಳ ಪಾಠಗಳನ್ನು ಕಲಿಸುವ ಬಗೆಯನ್ನು ಮುಂಚಿತವಾಗಿಯೇ ಅಧ್ಯಯನ ಮಾಡುತ್ತಾರೆ. ಆಮೇಲೆ ಅದಕ್ಕೆ ಬೇಕಾದ ಸಲಕರಣೆಗಳನ್ನು ಜೋಡಿಸಿಕೊಳ್ಳುತ್ತಾರೆ. ನಾಟಕ ನಡೆಸಲು ಉಡುಗೆ ತೊಡುಗೆಗಳನ್ನು ರೂಪಿಸುತ್ತಾರೆ. ವಿಜ್ಞಾನ ಪ್ರಯೋಗಕ್ಕೆ ಸಾಧನಗಳನ್ನು ಸಜ್ಜುಗೊಳಿಸುತ್ತಾರೆ. ಹಾಡಿಗೆ ಬೇಕಾದ ನೃತ್ಯವನ್ನು ಸಂಯೋಜಿಸುತ್ತಾರೆ. ಪ್ರತಿಯೊಂದೂ ಪಾಠವನ್ನು ಆಟ, ನೃತ್ಯ, ನಾಟಕ, ಸಂಗೀತದ ಮೂಲಕ ಮಕ್ಕಳು ಹೇಗೆ ಅತ್ಯಂತ ಆಸಕ್ತಿಯುತವಾಗಿ ಕಲಿಯಬಹುದು ಎಂಬ ಬಗ್ಗೆ ತಯಾರಿ ನಡೆಸಿ ಬರುತ್ತಾರೆ.
ಶಿಕ್ಷಕ ಚೇತನ
ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರೂ ಸೂಕ್ತ ತರಬೇತಿಯನ್ನು ಪಡೆದು ಮಕ್ಕಳಿಗೆ ಚೆನ್ನಾಗಿ ಕಲಿಸಬೇಕು ಎಂಬುದು ಅದಮ್ಯ ಚೇತನದ ಸದಾಶಯ. ಈ ನಿಟ್ಟಿನಲ್ಲಿ ‘ಶಿಕ್ಷಕ ಚೇತನ’ ಯೋಜನೆಯ ಮೂಲಕ ಶಿಕ್ಷಕರಿಗೆ ವಿವಿಧ ಬಗೆಯ ತರಬೇತಿಗಳನ್ನು ನೀಡಲಾಗುತ್ತಿದೆ.
ಶಾಲಾ ಮಕ್ಕಳ ದತ್ತು ಯೋಜನೆ
ಅನ್ನ – ಅಕ್ಷರ – ಆರೋಗ್ಯ ಧ್ಯೇಯವಾಕ್ಯದಡಿ ಹತ್ತು ಹಲವು ಯೋಜನೆಗಳನ್ನು ಅದಮ್ಯ ಚೇತನವು ಕೈಗೊಂಡಿದೆಯಷ್ಟೆ. ಇಂಥ ಹಲವು ಸೇವೆಗಳನ್ನು ಒಂದೇ ಚೌಕಟ್ಟಿನಡಿ ತಂದು ಮಕ್ಕಳಿಗೆ ಹಲವು ಬಗೆಯ ನೆರವುಗಳನ್ನು ನೀಡುವುದೇ ‘ದತ್ತು ಯೋಜನೆ’ಯ ಉದ್ದೇಶ.
ಸೇವಾ. ಓ ಆರ್ ಜಿ
ಇಂದು ಸೇವಾ ಚಟುವಟಿಕೆಗಳು ಹೆಚ್ಚಾಗಿವೆ. ಆದರೆ ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅದಮ್ಯ ಚೇತನವು ಪ್ರತೀ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಇಂಥ ಸೇವಾ ಸಂಘಟನೆಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. “ಸೇವಾ.oಡಿg’’ ಎಂಬ ಈ ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡು ರಂಜಿಸುತ್ತಲೇ ಸಾಮಾಜಿಕ ಚಟುವಟಿಕೆಗಳಲ್ಲಿ ಸಾರ್ವಜನಿಕರನ್ನು ತೊಡಗಿಸುವ, ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತಿದೆ.
ರಕ್ತದಾನ್
(www.raktadan.org)
ಇಂದು ರಕ್ತದಾನ ನಿಜಕ್ಕೂ ಜೀವದಾನವೇ ಆಗಿದೆ. ಅಪಘಾತಗಳು ಹೆಚ್ಚುತ್ತಿವೆ; ಜೀವನ್ಮರಣದ ಅಂಚಿನಲ್ಲಿರುವ ರೋಗಿಗಳಿಗೆ ಆರೋಗ್ಯಕರ ರಕ್ತ ಸಿಗುವುದೇ ದೊಡ್ಡ ಸವಾಲಾಗಿದೆ. ಹತ್ತು ವರ್ಷಗಳ ಹಿಂದೆಯೇ ಈ ಅಗತ್ಯವನ್ನು ಮನಗಂಡು ಅದಮ್ಯ ಚೇತನದ ವತಿಯಿಂದ ರಕ್ತದಾನ.ಓ ಆರ್ ಜಿ ಜಾಲತಾಣವನ್ನು ರೂಪಿಸಲಾಯಿತು. ಇಂದು ಈ ಜಾಲತಾಣವು ದೇಶದ ಪ್ರಮುಖ ರಕ್ತದಾನ ವೆಬ್‌ಸೈಟ್‌ಗಳಲ್ಲಿ ಒಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುವವರಿಗೆ ನೆರವಾಗುತ್ತಿದೆ.
ಈ ಜಾಲತಾಣದಲ್ಲಿ ಸಾರ್ವಜನಿಕರು ತಾವಾಗಿಯೇ ಬಂದು ರಕ್ತದಾನಕ್ಕಾಗಿ ಹೆಸರು ನೋಂದಾಯಿಸಬಹುದು. ವಿವಿಧ ರಕ್ತದಾನ ಶಿಬಿರಗಳಲ್ಲಿ ನೋಂದಾವಣೆಯಾದವರ ಹೆಸರುಗಳನ್ನೂ ಈ ಜಾಲತಾಣದಲ್ಲಿ ಸೇರಿಸಲಾಗುತ್ತದೆ. ಅದಮ್ಯ ಚೇತನವು ಈಗಾಗಲೇ ಹಲವಾರು ಬಾರಿ ಇಂಥ ರಕ್ತದಾನ ಶಿಬಿರಗಳನ್ನು ನಡೆಸಿದೆ.
ಗೋಡೆ ಪತ್ರಿಕೆ
ಅನ್ನ – ಅಕ್ಷರ – ಆರೋಗ್ಯ ಧ್ಯೇಯವಾಕ್ಯದಡಿ ಹತ್ತು ಹಲವು ಯೋಜನೆಗಳನ್ನು ಅದಮ್ಯ ಚೇತನವು ಕೈಗೊಂಡಿದೆ. ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳಸಲು ’ಅದಮ್ಯ ಚೇತನ’ವು ಗೋಡೆ ಪತ್ರಿಕೆಯನ್ನು ಆರಂಭಿಸಿದೆ.
ನಮ್ಮ ದೇಶದ ಹಿರಿಮೆ – ಗರಿಮೆಯನ್ನು ಬಿಂಬಿಸುವ ಕಥೆ, ಕವನ, ಸುದ್ದಿಗಳನ್ನು, ಲೋಕಜ್ಞಾನವನ್ನು ಒಳಗೊಂಡಿರುವ ಈ ಪತ್ರಿಕೆಯು ತಿಂಗಳಿಗೊಮ್ಮೆ ಪ್ರಕಟವಾಗಲಿದೆ. ಮಕ್ಕಳಲ್ಲಿ ವಿವಿಧ ವಿಷಯಗಳ ಬಗ್ಗೆ ಆಸಕ್ತಿ ಹುಟ್ಟಿಸುವುದು ಈ ಯತ್ನದ ಉದ್ದೇಶ. ನಿಯಮಿತವಾಗಿ ಈ ಗೋಡೆಪತ್ರಿಕೆಯನ್ನು ಓದುತ್ತ ಮಕ್ಕಳು ಮುಂದಿನ ದಿನಗಳಲ್ಲಿ ಓದುವ ಅಭಿರುಚಿ ಬೆಳೆಸಿಕೊಂಡು ಸಂಸ್ಕೃತಿ – ಪರಂಪರೆ ಉಳಿಸಲು ಮುಂದಾಗಬೇಕು ಎಂಬುದು ಈ ಯೋಜನೆಯ ಸದಾಶಯ.
ಬಹುಮುಖಿ ಚಟುವಟಿಕೆಗಳು
ಅದಮ್ಯ ಚೇತನದ ಚಟುವಟಿಕೆಗಳು ಅತ್ಯಂತ ವೈಜ್ಞಾನಿಕ ವಿಧಾನದಲ್ಲಿ ನಡೆಯುತ್ತಿರುವುದಕ್ಕೆ ಶ್ರೀಮತಿ ತೇಜಸ್ವಿನಿಯವರ ನಿರಂತರ ಪರಿಶ್ರಮ ಮತ್ತು ಪ್ರಯೋಗಶೀಲತೆಯೇ ಕಾರಣ. ಈ ಸಂಸ್ಥೆಯಲ್ಲಿ ಸಾಮಾನ್ಯ ಶಿಕ್ಷಿತರು ಮತ್ತು ಅತಿ ಕಡಿಮೆ ಶಿಕ್ಷಣ ಪಡೆದವರೂ ವ್ಯವಸ್ಥಿತವಾಗಿ ದಿನದ ಕೆಲಸಗಳನ್ನು ಮಾಡುತ್ತಾರೆ; ದಿನವೂ ಮಾಡಿದ ಕೆಲಸಗಳ ವರದಿ ತಯಾರಿಸುತ್ತಾರೆ.
ಅದಮ್ಯ ಚೇತನ ಸಂಸ್ಥೆಯು ಇಂದು ಭಾರತದ ಪ್ರಮುಖ ಸೇವಾ ಸಂಸ್ಥೆಯಾಗಿ ಜನಪ್ರಿಯವಾಗುವುದರಲ್ಲಿ ಶ್ರೀಮತಿ ತೇಜಸ್ವಿನಿ ಮತ್ತು ಅವರ ಕಾರ್ಯತಂಡದ ನಿರಂತರ ಪರಿಶ್ರಮವಿದೆ. ಟೇರಿ ಸಂಸ್ಥೆಯ ಬಯೋಗ್ಯಾಸಿಫೈಯರನ್ನು ಅನ್ನಪೂರ್ಣ ಘಟಕದಲ್ಲಿ ಸ್ಥಾಪಿಸುವುದಿರಲಿ, ಆರೋಗ್ಯ ಚೇತನದಡಿ ದೇಶದಲ್ಲೇ ಮೊದಲ ಬಾರಿಗೆ ಔಟ್ಪೇಶೆಂಟ್ಗಳಿಗೂ ವಾರ್ಷಿಕ ವಿಮೆ ಕೊಡಿಸುವುದಿರಲಿ, ಮಕ್ಕಳಿಗೆ ಆಟ ಪಾಠ ಯೋಜನೆಯ ಮೂಲಕ ಹೊಸಬಗೆಯಲ್ಲಿ ಪಾಠ ಹೇಳಿಕೊಡುವುದಿರಲಿ, ಎಲ್ಲ ಚಟುವಟಿಕೆಗಳಲ್ಲಿ ಶ್ರೀಮತಿ ತೇಜಸ್ವಿನಿಯವರ ಕಾರ್ಯದಕ್ಷತೆಯ ಛಾಪಿದೆ.
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಈಗ ನಾಲೆಜ್ ಪಾರ್ಕ್ ಆಫ್ ಇಂಡಿಯಾ ಟ್ರಸ್ಟ್ ಎಂಬ ಶಿಕ್ಷಣ ಸಂಸ್ಥೆಯ ಟ್ರಸ್ಟಿಯೂ ಆಗಿದ್ದಾರೆ. ಈ ಸಂಸ್ಥೆಯು ಕಳೆದ ವರ್ಷ ಬಿಡದಿ ಇಂಡಸ್ಟ್ರಿಯಲ್ ಪ್ರದೇಶದ ಬಳಿ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್ಮೆಂಟ್ ಸೈನ್ಸಸ್ ಎಂಬ ಕಾಲೇಜನ್ನು ಸ್ಥಾಪಿಸಿದೆ. ವಿಶಿಷ್ಟ ಕಲಿಕೆ ವಿಧಾನ ಹಾಗೂ ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಬೆಳವಣಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಈ ಕಾಲೇಜು ಈಗಾಗಲೇ ಜನಪ್ರಿಯವಾಗಿದೆ.
ಮೊಬೈಲ್: 9449867979
ಈ ಮೈಲ್: tejaswin_a@yahoo.co.in





