ಸಚಿವರಾಗಿ
ನಾಗರಿಕ ವಿಮಾನಯಾನ ಸಚಿವ
ನಾಗರಿಕ ವಿಮಾನಯಾನ ಸಚಿವರಾಗಿ ಅನಂತಕುಮಾರ್ ಹಲವು ಉಪಕ್ರಮಗಳನ್ನು ಕೈಗೊಂಡರು; ಪರಿಣಾಮವಾಗಿ ಭಾರತದ ಪ್ರವಾಸೋದ್ಯಮವು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯಿತು. ಜಾಗತಿಕ ವಿಮಾನ ರಂಗದಲ್ಲಿ ಭಾರತವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಲೂ ಅನಂತಕುಮಾರ್ ಕ್ರಮಗಳು ನೆರವಾದವು.
ಆವರೆಗೆ ನಷ್ಟದಲ್ಲೇ ನಲುಗುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಮತ್ತೆ ಸುಧಾರಿಸಿಕೊಂಡವು; ವಹಿವಾಟು ಹೆಚ್ಚಾಯಿತು; ಅಭೂತಪೂರ್ವ ಎಂಬಂತೆ ದಾಖಲೆಯ ವರಮಾನ ಬಂತು.
ಬೆಂಗಳೂರಿಗೆ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆಂಬುದು ಕನ್ನಡಿಗರ ಒಂದು ದಶಕಗಳ ಕನಸಾಗಿತ್ತು. ೧೯೯೯ರಲ್ಲಿ ನಾಗರಿಕ ವಿಮಾನಯಾನ ಸಚಿವರಾದ ಕೂಡಲೇ ಅವರು ಸಹಿ ಹಾಕಿದ ಒಡಂಬಡಿಕೆ ಪತ್ರವೇ ಇಂದು ದೇವನಹಳ್ಳಿಯಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೂಡಿಬರಲು ಕಾರಣವಾಗಿದೆ.
ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಹೆಸರಾಗಿದ್ದ ಬೆಂಗಳೂರಿನಲ್ಲಿ ಜನ ಒಂದು ಗುಣಮಟ್ಟದ ವಿಮಾನ ನಿಲ್ದಾಣವನ್ನು ಬಯಸಿದ್ದರು. ಅನಂತಕುಮಾರ್ ತಮ್ಮ ಅಧಿಕಾರ ಸ್ವೀಕಾರದ ಹತ್ತೇ ತಿಂಗಳುಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಚಹರೆಯನ್ನೇ ಬದಲಿಸಿದರು. ಈ ವಿಮಾನ ನಿಲ್ದಾಣವು ಸದಾ ಸುವ್ಯವಸ್ಥೆಯಿಂದ ಕೂಡಿ ಜನ ಗಿಜಿಗುಟ್ಟುವಂತೆ ಮತ್ತು ನಿಲ್ದಾಣವು ಪ್ರವಾಸಿಗ ಸ್ನೇಹಿ ತಾಣವಾಗುವಂತೆ ಮಾಡಿದ್ದರಲ್ಲಿ ಅನಂತಕುಮಾರ್ ಪಾತ್ರ ತುಂಬಾ ಪ್ರಮುಖವಾದುದು. ಒಂದು ಹೊಸ ಅಂತಾರಾಷ್ಟ್ರೀಯ ಟರ್ಮಿನಲ್ ರಚನೆ, ಏರೋ ಬ್ರಿಜ್‌ಗಳ ನಿರ್ಮಾಣ, ಈಗಿರುವ ವ್ಯವಸ್ಥೆಗೆ ಇನ್ನಷ್ಟು ವಿಸ್ತಾರಿತ ರನ್‌ವೇಗಳ ಸೇರ್ಪಡೆ – ಹೀಗೆ ವಿಮಾನ ನಿಲ್ದಾಣವು ಜನಪ್ರಿಯವಾಗುವಂತೆ ಮಾಡಿದರು. ಈ ಕಾರಣಕ್ಕಾಗಿಯೇ ಬೆಂಗಳೂರಿನಿಂದ ನ್ಯೂಯಾರ್ಕ್‌ಗೆ ನೇರವಾಗಿ ವಿಮಾನಯಾನ ಆರಂಭವಾಯಿತು. ಮುಂದೆ ಹಲವು ಮಾರ್ಗಗಳಲ್ಲಿ ವಿಮಾನಯಾನ ಆರಂಭವಾಗಲು ಅಂತಕುಮಾರ್ ಶ್ರಮವೇ ಆಸರೆಯಾಯಿತು ಎನ್ನುವುದು ಇಲ್ಲಿ ಉಲ್ಲೇಖನೀಯ.
ಇದಲ್ಲದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೇಗ ಹಾಳಾಗುವ ವಸ್ತುಗಳಿಗೆ ಟರ್ಮಿನಲ್ ಇಲ್ಲದೆ ಸಮಸ್ಯೆಯಾಗಿತ್ತು. ಇದರಿಂದಾಗಿ ಇಂಥ ವಸ್ತುಗಳ ರಫ್ತಿಗೆ ತುಂಬಾ ತೊಡಕಾಗಿತ್ತು. ದಿಲ್ಲಿಯ ನಂತರ ಬೆಂಗಳೂರಿನಲ್ಲೇ ಇಂಥ ಪೆರಿಶಬಲ್ ವಸ್ತುಗಳ ಟರ್ಮಿನಲ್ ಸ್ಥಾಪನೆಯಾಯಿತು. ಕರ್ನಾಟಕ ಆರ್ಥಿಕ ವಹಿವಾಟು ೩೦೦ ಕೋಟಿ ರೂ.ಗಳಷ್ಟು ಹೆಚ್ಚಿತು.
ಭಾರತದ ವಿವಿಧ ಪ್ರದೇಶಗಳಲ್ಲಿ ಒಟ್ಟು ೧೫೪ ವಿಮಾನ ಪಟ್ಟಿಗಳಿವೆ (ಏರ್‌ಸ್ಟ್ರಿಪ್). ಈ ಎಲ್ಲಾ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡುವುದೇ ಒಂದುದೊಡ್ಡ ಸವಾಲು. ಆದರೆ ಅನಂತಕುಮಾರ್‌ರವರ ಅದಮ್ಯ ಉತ್ಸಾಹದಿಂದಾಗಿ ಈ ಕೆಲಸ ಎರಡೇ ತಿಂಗಳುಗಳಲ್ಲಿ ಸಾಧ್ಯವಾಯಿತು. ಹಲವು ದಿಕ್ಕುಗಳಲ್ಲಿದ್ದ ವಿಮಾನ ನಿಲ್ದಾಣಗಳ ವ್ಯವಸ್ಥೆ ಸರಿಯಾಗುವಲ್ಲಿ ಅನಂತಕುಮಾರ್ ಪಾತ್ರ ತುಂಬಾ ಗಮನಾರ್ಹವಾದುದು.
ಸಂಸ್ಕೃತಿ ಸಚಿವರಾಗಿ ಅನಂತಕುಮಾರ್
ಸಂಸ್ಕೃತಿಯು ಹಲವು ನಾಗರಿಕತೆಗಳ ಅಸ್ತಿತ್ವದ ಬೆನ್ನೆಲುಬಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಂಸ್ಕೃತಿಯಿಲ್ಲದ ನಾಗರಿಕತೆಗಳು ಕಾಲದ ಗತಿಯಲ್ಲಿ ವಿನಾಶವಾಗುತ್ತವೆ ಎಂದು ಸ್ವಾಮಿ ವಿವೇಕಾನಂದರು ಸರಿಯಾಗಿಯೇ ಹೇಳಿದ್ದಾರೆ. ವಿಶ್ವದ ಅತಿ ಪ್ರಾಚೀನ ಸಂಸ್ಕೃತಿಯಾಗಿ ನಮಗೆ ಈ ವಸುಂಧರೆಯಲ್ಲಿ ಬಹು ದೊಡ್ಡ ಹೊಣೆಗಾರಿಕೆಗಳಿವೆ. ಭಾರತೀಯ ಸಂಸ್ಕೃತಿಯ ಅಪ್ಪಟ ರಾಯಭಾರಿಯಾಗಿರುವ ಶ್ರೀ ಅನಂತಕುಮಾರರು ಸಂಸ್ಕೃತಿ ಸಚಿವರಾಗಿದ್ದಾಗ ಹಲವು ಐತಿಹಾಸಿಕ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದರು. ಪ್ರತಿಯೊಂದು ಕಾರ್ಯಕ್ರಮವೂ ಎಲ್ಲ ಭಾರತೀಯರೂ ಹೆಮ್ಮೆ ಪಡುವಂಥವೇ. ಕ್ರಿ.ಶ. ೨೦೦೦ದ ಇಸವಿಯಲ್ಲಿ ಭಾರತವು ಹೊಸ ಸಹಸ್ರಮಾನವನ್ನು ದಾಟಿದ ಸಂದರ್ಭದಲ್ಲೇ ಭಾರತವು ಗಣರಾಜ್ಯವಾಗಿ ೫೦ ವರ್ಷಗಳೂ ಕಳೆದವು ಎಂಬುದು ಇಲ್ಲಿ ಕೇವಲ ಆಕಸ್ಮಿಕ; ಆದರೆ ಅಚ್ಚರಿದಾಯಕ! ಆದ್ದರಿಂದಲೇ ಶ್ರೀ ಅನಂತಕುಮಾರರು ಭಾರತೀಯ ಸಂಸ್ಕೃತಿಯ ಸ್ಫೂರ್ತಿಯನ್ನು ಮತ್ತು ಪರಂಪರೆಯನ್ನು ಈ ನೆಲದಲ್ಲಿ ಮತ್ತಷ್ಟು ಹಾಸು ಹೊಕ್ಕಾಗಿಸುವತ್ತ ಹಲವು ಕಾರ್ಯಕ್ರಮಗಳ ಸರಣಿಯನ್ನೇ ಹಮ್ಮಿಕೊಂಡರು.
ಈ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ:
- ಕಾಶ್ಮೀರದ ತುತ್ತತುದಿಯಾದ ಲೆಹ್‌ನಲ್ಲಿ ನಡೆದ ‘ಸಿಂಧೂ ದರ್ಶನ’ವು ಭಾರತದ ಸಾಂಸ್ಕೃತಿಕ ಪುನರುತ್ಥಾನದ ಒಂದು ಮಹತ್ವದ ಐತಿಹಾಸಿಕ ಕಾರ್ಯಕ್ರಮವಾಯಿತು. ಇಲ್ಲೀಗ ಸಿಂಧೂ ಸಾಂಸ್ಕೃತಿಕ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಘಾಟ್ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ; ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳನ್ನು ಸಾಕಷ್ಟು ಸುಧಾರಿಸಲಾಗಿದೆ. ಸಿಂಧೂ ಸಂಸ್ಕೃತಿಯನ್ನು ಉತ್ತೇಜಿಸಲು, ಈ ಅತ್ಯುನ್ನತ ಸ್ಥಳದಲ್ಲಿರುವ ವಿಮಾನ ನಿಲ್ದಾಣವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಮೇಲ್ದರ್ಜೆಗೇರಿಸಲಾಗಿದೆ. ಸಂಸ್ಕೃತಿ ಇಲಾಖೆಯು ಸಿಂಧೂ ದರ್ಶನವನ್ನು ಒಂದು ರಾಷ್ಟ್ರೀಯ ಉತ್ಸವ ಎಂದು ಘೋಷಿಸಿದೆ. ಇದು ಭಾರತದ ಹೆಮ್ಮೆಯ ಉತ್ಸವವಾಗಿ ಮೂಡಿಬಂದಿದೆ.
- ಶ್ರೀ ಅನಂತಕುಮಾರರು ಇಂದಿರಾಗಾಂಧಿ ನ್ಯಾಶನಲ್ ಸೆಂಟರ್ ಫಾರ್ ಆರ್ಟ್ಸ್ (ಐಜಿಎನ್‌ಸಿಎ) ಸಂಸ್ಥೆಯನ್ನು ೨೦೦೦ದಲ್ಲಿ ಪುನಾರಚಿಸಿ ದೇಶದ ಗಣ್ಯ ವ್ಯಕ್ತಿಗಳನ್ನು ಅದರ ಮಂಡಳಿಯ ಸದಸ್ಯರನ್ನಾಗಿ ಮಾಡಿದರು.
- ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವ: ಭಾರತದ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರಪ್ರಥಮ ರಾಷ್ಟ್ರೀಯ ನಾಟಕ ಹಬ್ಬ – ಭಾರತ್ ರಂಗ್ ಮಹೋತ್ಸವ್’ ವನ್ನು ಆಚರಿಸಲಾಯಿತು. ಈ ಮೇಳದಲ್ಲಿ ೭೦ ರಂಗ ತಂಡಗಳು ಭಾಗವಹಿಸಿದ್ದವು. ಇಡೀ ದೇಶದ ಎಲ್ಲ ಪ್ರಮುಖ ರಂಗತಂಡಗಳು ಈ ಮೇಳದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ.
- ಖಾಲ್ಸಾರವರ ಜನ್ಮದಿನದ ೩೦೦ನೇ ವರ್ಷ ಹಾಗೂ ಮಹಾವೀರ ತೀರ್ಥಂಕರರ ೨೬೦೦ನೇ ಜನ್ಮ ವರ್ಷವನ್ನು ಆಚರಿಸಿದ ಜೊತೆಗೇ ದೇಶದ ಹಲವು ಮಹಾವ್ಯಕ್ತಿಗಳ ಜನ್ಮ ಶತಮಾನೋತ್ಸವವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
- ರವೀಂದ್ರನಾಥ ಠಾಗೋರ್, ನಂದಲಾಲ್ ಬೋಸ್, ಅಮೃತಾ ಶೇರ್‌ಗಿಲ್, ನಿಕೋಲಾಸ್ ರೋರಿಚ್ ಮೊದಲಾಗಿ ಒಂಬತ್ತು ಪ್ರಮುಖ ಕಲಾವಿದರ ಕಲಾಕೃತಿಗಳನ್ನು ಡಿಜಿಟೈಸ್ ಮಾಡುವ ಯೋಜನೆ ಚಾಲನೆಗೊಂಡಿತು. ದೇಶದ ಪ್ರಮುಖ ಕಲಾಕೃತಿಗಳ ಪಟ್ಟಿಯನ್ನು ಸಿಡಿ ಮೂಲಕ ಸಂಗ್ರಹಿಸಿಡುವ ಕೆಲಸವೂ ಆರಂಭವಾಯಿತು. ಹಂಪಿ, ತಾಜಮಹಲ್, ಖಜುರಾಹೋ, ಕೋಣಾರ್ಕ, ಸೋಮೇಶ್ವರದಂಥ ಪರಂಪರೆಯ ಕೇಂದ್ರಗಳ ಕುರಿತ ವಾಕ್‌ಥ್ರೂ ಸಿಡಿಗಳನ್ನು ಬಿಡುಗಡೆ ಮಾಡಲಾಯಿತು. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು.
- ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾವು (ಎಎಸ್‌ಐ) ೫೦೦ಕ್ಕೂ ಹೆಚ್ಚು ಸ್ಮಾರಕಗಳಲ್ಲಿ ಸಂರಕ್ಷಣೆ, ದುರಸ್ತಿ, ರಾಸಾಯನಿಕ ಸುರಕ್ಷತೆ, ಪಾರಿಸರಿಕ ಕ್ರಮಗಳು – ಮುಂತಾದ ಯೋಜನೆಗಳನ್ನು ಕೈಗೊಂಡಿತು. ರಾಖಿಗರ್‍ಹಿ, ಗುಲಬರ್ಗಾ, ಲೋಥಾಲ್, ಹಂಪಿ, ಪುರಾನಾ ಕಿಲಾ, ಕುರುಕ್ಷೇತ್ರ ಮುಂತಾದ ಕಡೆಗಳಲ್ಲಿ ಹಲವು ಐತಿಹಾಸಿಕ ಸಾಕ್ಷ್ಯಗಳು ದೊರೆತವು. ಇವುಗಳಿಂದಾಗಿ ಭಾರತದ ಇತಿಹಾಸದ ಪುಟಗಳೇ ಬದಲಾಗುವಂತಾಯಿತು.
- ಸಾಂಸ್ಕೃತಿಕ ವಿನಿಮಯ: ಭಾರತವು ಸಾಂಸ್ಕೃತಿಕ ವಿನಿಮಯಕ್ಕಾಗಿ ೭೬ ದೇಶಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಕಾಂಬೋಡಿಯಾ ಮತ್ತು ಕ್ರೋವೇಶಿಯಾ ದೇಶಗಳೊಂದಿಗೆ ಪ್ರಪ್ರಥಮ ಸಾಂಸ್ಕೃತಿಕ ಸಹಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
- ಕುರುಕ್ಷೇತ್ರದಲ್ಲಿ ಮಹಾಭಾರತದ ಭವ್ಯ ದೃಶ್ಯವನ್ನು ಸ್ಥಾಪಿಸಲಾಯಿತು. ೩೪ ಅಡಿ ಎತ್ತರದ, ೪೦೦ ಅಡಿ ಉದ್ದದ ಒಂದು ವೃತ್ತಾಕಾರದ ರಚನೆಯನ್ನು ನಿರ್ಮಿಸಲಾಗಿದ್ದು ಇದು ದೇಶದಲ್ಲೇ ವಿಶಿಷ್ಟವಾಗಿದೆ.
ಪ್ರವಾಸೋದ್ಯಮ ಸಚಿವರಾಗಿ
ಭಾರತದ ಮರುಶೋಧಕ್ಕೆ ಪ್ರವಾಸೋದ್ಯಮದಲ್ಲಿ ಕ್ರಾಂತಿಯ ಹೆಜ್ಜೆಗಳು
ಶ್ರೀ ಅನಂತಕುಮಾರರು ಮೊದಲೇ ಪ್ರವಾಸದಲ್ಲಿ ಅತೀವ ಆಸಕ್ತಿಯನ್ನು ಹೊಂದಿದವರು. ತಮ್ಮ ಈ ಸ್ಫೂರ್ತಿಯನ್ನೇ ಅವರು ವಿಶ್ವದೆಲ್ಲೆಡೆಯಿಂದ ಭಾರತಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ದಾಟಿಸಿದರು. ಪ್ರವಾಸೋದ್ಯಮ ಸಚಿವರಾಗಿ ಅವರು ಕೈಗೊಂಡ ಕ್ರಮಗಳಿಂದಾಗಿ ಭಾರತವು ಪ್ರವಾಸದ ಮೂಲಕ ಗಳಿಸುತ್ತಿದ್ದ ವಿದೇಶಿ ವಿನಿಮಯವು ಗರಿಷ್ಠ ಪ್ರಮಾಣವನ್ನು ತಲುಪಿತು. ನಮ್ಮ ಸಾಂಸ್ಕೃತಿಕ ಹೆಮ್ಮೆಯ ಕೇಂದ್ರಬಿಂದುಗಳು ವಿಶ್ವದ ಪ್ರವಾಸಿಗರನ್ನು ಕೈಬೀಸಿ ಕರೆದವು. ಪ್ರವಾಸೋದ್ಯಮದಿಂದ ಬರುವ ಆದಾಯವು ೧೪ ಸಾವಿರ ಕೋಟಿ ರೂ.ಗಳನ್ನು ದಾಟಿತು; ಪ್ರವಾಸೋದ್ಯಮ ಕ್ಷೇತ್ರವೊಂದರಲ್ಲೇ ೪೦ ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಜನಗೊಂಡವು. ಕಾರ್ಗಿಲ್ ಸಮರ, ಗುಜರಾತ್ ಭೂಕಂಪ ಮತ್ತು ಒರಿಸ್ಸಾ ನೆರೆಯ ನಡುವೆಯೂ ಪ್ರವಾಸೋದ್ಯಮ ಬೆಳೆಯಿತು.
ಕೆಲವು ಮುಖ್ಯಾಂಶಗಳು
- ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ರಂಗದ ಸಂಸ್ಥೆಗಳೂ ಪಾಲ್ಗೊಳ್ಳುವ ವಿನೂತನ ವ್ಯವಸ್ಥೆಯನ್ನು ಶ್ರೀ ಅನಂತಕುಮಾರ್ ಜಾರಿಗೆ ತಂದರು. ಈ ಹಿನ್ನೆಲೆಯಲ್ಲಿ ದೇಶದ ೩೪ ಐತಿಹಾಸಿಕ ಸ್ಮಾರಕಗಳನ್ನು ಕಾರ್ಪೋರೇಟ್ ರಂಗದ ಸಂಸ್ಥೆಗಳ ಮೂಲಕ ಸಂರಕ್ಷಿಸುವುದಕ್ಕಾಗಿ, ನಿರ್ವಹಿಸುವುದಕ್ಕಾಗಿ ಗುರುತಿಸಲಾಯಿತು. ಭಾರತದಲ್ಲಿ ಇದೇ ಮೊದಲ ಬಾರಿಗೆ ಟಾಟಾಗಳು, ಐಟಿಡಿಸಿ, ಐಓಸಿಎಲ್ ಮುಂತಾದ ಸಂಸ್ಥೆಗಳು ಇಂಥ ರಾಷ್ಟ್ರೀಯ ಕಾರ್ಯಕ್ಕಾಗಿ ಮುಂದೆ ಬಂದವು.
- ಮಾಹಿತಿ ತಂತ್ರಜ್ಞಾನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಪ್ರವಾಸಿಗರಿಗೆ ಹೆಚ್ಚು ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದವು.
- ದಿಲ್ಲಿಯ ಕೆಂಪುಕೋಟೆಯ ಬಗ್ಗೆ ವಾಕ್‌ಥ್ರೂ ಮಾಡುತ್ತ ಮಾಹಿತಿ ಪಡೆಯಬಹುದಾದ ಗಣಕೀಕೃತ ಎಲೆಕ್ಟ್ರಾನಿಕ್ ಗೈಡ್ ವ್ಯವಸ್ಥೆಗಳು ಸ್ಥಾಪನೆಗೊಂಡವು.
- ದಿಲ್ಲಿ ವಿಮಾನ ನಿಲ್ದಾಣದಲ್ಲಿ ಹೋಟೆಲ್ ರೂಮುಗಳ ಬುಕಿಂಗ್ ಮತ್ತಿತರ ಉಪಯುಕ್ತ ಮಾಹಿತಿಗಳನ್ನು ನೀಡುವಂಥ ೩೪ ಟಚ್ ಸ್ಕ್ರೀನ್ ಕಿಯಾಸ್ಕ್ ಗಳನ್ನು ಸ್ಥಾಪಿಸಲಾಯಿತು.
- ಕುತುಬ್ ಮಿನಾರ್ ಗೋಪುರನ್ನು ಹತ್ತದೆಯೇ ದೂರದಿಂದಲೇ ಅದರ ಅನುಭವವನ್ನು ಪಡೆಯಬಹುದಾದ ಭ್ರಮಾತ್ಮಕ ವ್ಯವಸ್ಥೆಯನ್ನೂ ಈ ಕಾಲದಲ್ಲಿ ರೂಪುಗೊಳಿಸಿ ಜಾರಿ ಮಾಡಲಾಯಿತು. ಹಾಗೆಯೇ ಈ ದೃಶ್ಯವನ್ನು ಮಿತ್ರರಿಗೆ ಕಳಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು. ಬಹುಶಃ ಇದು ಇಡೀ ವಿಶ್ವದಲ್ಲೇ ಒಂದು ಅತ್ಯಪರೂಪದ ವ್ಯವಸ್ಥೆಯಾಗಿದೆ.
- ಪ್ರವಾಸೋದ್ಯಮ ಇಲಾಖೆಯು ರಾಷ್ಟ್ರೀಯ ಪ್ರವಾಸ ನೀತಿಯನ್ನು ರೂಪಿಸಿತು. ಸ್ವಾಗತ, ಆತಿಥ್ಯ, ಮಾಹಿತಿ, ಸುರಕ್ಷತೆ – ಭದ್ರತೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಮತ್ತು ಸಾರ್ವಜನಿಕ – ಖಾಸಗಿ ಸಹಕಾರ – ಈ ಆರು ಅಂಶಗಳನ್ನು ಒಳಗೊಂಡ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಯಿತು.
- ೨೦೦೧ರಲ್ಲಿ ಕೌಲಾಲುಂಪುರದಲ್ಲಿ ನಡೆದ ಪೆಸಿಫಿಕ್ ಏರಿಯಾ ಟೂರಿಸಮ್ ಅಸೋಸಿಯೇಶನ್ (ಪಾಟಾ) ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯು ಭಾರತಕ್ಕೆ ಸಂದಿತು. ಮಲೇಶ್ಯಾದ ಪ್ರಧಾನಮಂತ್ರಿಯವರು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಭಾರತ ಸಂಜೆಯ ಒಂದು ವಿಶೇಷ ಕಾರ್ಯಕ್ರಮವೂ ಇತ್ತು; ಇಲ್ಲಿ ಭಾರತದ ಪ್ರವಾಸೋದ್ಯಮದ ಹಲವು ಆಯಾಮಗಳನ್ನು ಬಿಂಬಿಸಲಾಯಿತು.
- ಭಾರತದಲ್ಲಿರುವ ಪ್ರವಾಸಿ ಮೂಲಸಂರಚನೆಗಳನ್ನು ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ೭೭ ಕೋಟಿ ರೂ.ಗಳ ಮೊತ್ತದ ಒಟ್ಟು ೩೩೭ ಯೋಜನೆಗಳನ್ನು ೨೦೦೦-೨೦೦೧ರಲ್ಲಿ ಅನುಮೋದಿಸಿತು.
- ೨೦೦೧-೨೦೦೨ರಲ್ಲಿ ೧೬೦ ಕೋಟಿ ರೂ. ಮೊತ್ತದ ೫೫೦ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆಯು ಅನುಮೋದಿಸಿತು.
- ಪ್ರವಾಸಿ ಏಜೆಂಟರು, ಟೂರ್ ಆಪರೇಟರ್‌ಗಳು ಮತ್ತು ಟೂರಿಸ್ಟ್ ಹಾಗೂ ಸಾರಿಗೆ ಆಪರೇಟರ್‌ಗಳ ಅನುಮೋದನಾ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಯು ಸರಳೀಕರಿಸಿತು.
ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವರಾಗಿ
ಬಡತನವನ್ನು ನಿವಾರಿಸುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಹಾಗೂ ಪ್ರತಿ ಇಲಾಖೆಯ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಶ್ರೀ ಅನಂತಕುಮಾರರು ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವರಾಗಿದ್ದಾಗ ಕೈಗೊಂಡ ಮಹತ್ವದ ಕ್ರಮಗಳು ಇಲ್ಲಿವೆ:
- ವ್ಯಾಂಬೇ ಯೋಜನೆಯಡಿ ( ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನಾ) ದೇಶದ ಬಡವರಿಗಾಗಿ ೫೧ ಲಕ್ಷ ಮನೆಗಳ ಮಂಜೂರಾತಿ.
- ಆಲಮಟ್ಟಿ ಅಣೆಕಟ್ಟಿನ ಮಟ್ಟವನ್ನು ಹೆಚ್ಚಿಸುವಲ್ಲಿ ಕೇಂದ್ರದ ಮನ ಒಲಿಸಿದ್ದರಿಂದ ೧೫೦ ಸಾವಿರ ಎಕರೆಗಳಷ್ಟು ಹೆಚ್ಚು ಹೊಲಗಳು ನೀರು ಪಡೆದವು.
- ಸುವರ್ಣ ಚತುಷ್ಪಥ ಯೋಜನೆಗೆ ಮಂಜೂರಾತಿ, ಇದರಲ್ಲಿ ಕರ್ನಾಟಕದಲ್ಲಿ ೭೦೦ ಕಿಮೀ ರಸ್ತೆ ಮೇಲ್ದರ್ಜೆಗೇರಿಸಿದ ಅಗ್ಗಳಿಕೆ.
- ಭಾರತದ ನಗರಾಭಿವೃದ್ಧಿ ಇತಿಹಾಸದಲ್ಲೇ ದಿಲ್ಲಿ ಮೆಟ್ರೋ ಒಂದು ಪ್ರಮುಖ ಮೈಲಿಗಲ್ಲು. ದಾಖಲೆ ಸಮಯದಲ್ಲಿ ಪೂರ್ಣಗೊಂಡ ದಿಲ್ಲಿ ಮೆಟ್ರೋ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿದ ಉತ್ಕೃಷ್ಟ ಸಾರಿಗೆ ವ್ಯವಸ್ಥೆಯಾಗಿದೆ.
- ದಿಲ್ಲಿಯಲ್ಲಿ ಕರ್ನಾಟಕ ಭವನವೂ ಸೇರಿದಂತೆ ಹಲವಾರು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳಿಗೆ ನಿವೇಶನ ಮಂಜೂರಾತಿ.
- ದೇಶದಲ್ಲಿ ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರ ಅನುಕೂಲಕ್ಕಾಗಿ ಏಕೀಕೃತ ಕಟ್ಟಡ ನಿಯಮಾವಳಿಗಳನ್ನು ಬದಲಾಯಿಸಲಾಯಿತು; ಇದರಿಂದಾಗಿ ಇಂಥ ಎಲ್ಲ ವಿಕಲಚೇತನರೂ ಓಡಾಡುವಂತಾಯಿತು.
- ಪೊಲೀಸ್ ಪಡೆಗಳ ಸ್ಮರಣಾರ್ಥವಾಗಿ ಸಂಸತ್ತಿನ ಮೇಲೆ ಆಕ್ರಮಣವಾದ ಘಟನೆ ನಡೆದ ಮರುವರ್ಷ ಒಂದು ಭವ್ಯ ರಚನೆಯನ್ನು ನಿರ್ಮಿಸಲು ಅನುಮತಿ ನೀಡಲಾಯಿತು. ದೇಶದ ಸಾರ್ವಭೌಮತೆಯನ್ನು ಸಂರಕ್ಷಿಸಲು ಜೀವ ತೆತ್ತ ಎಲ್ಲ ಪೊಲೀಸರಿಗೂ ಈ ಸ್ಮಾರಕದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
- ವಿವಿಧ ರಾಜ್ಯಗಳಲ್ಲಿ ಅಗ್ಗದ ಮತ್ತು ವಿನೂತನ ಕಟ್ಟಡ ಸಾಮಗ್ರಿಗಳನ್ನು ಮತ್ತು ತಂತ್ರಜ್ಞಾನವನ್ನು ಪ್ರದರ್ಶಿಸುವ ಮೂಲಕ ಕಟ್ಟಡ ನಿರ್ಮಾಣ ತಂತ್ರಜ್ಞಾನ ಸಹಕಾರವನ್ನು ನೀಡಲಾಯಿತು.





