Think Nation First, Act Nation First, Make Nation First

Home > ಅನಂತಕುಮಾರ್: ಪರಿಚಯ > ಮನೆ, ಸಂಸ್ಕೃತಿ

ಮನೆ, ಸಂಸ್ಕೃತಿ


೧೯೫೯ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅನಂತಕುಮಾರ್ ಬೆಳೆದದ್ದು ಭಾರತೀಯ ಸಂಸ್ಕೃತಿಯ ಮೌಲ್ಯವನ್ನೇ ಪ್ರತಿಬಿಂಬಿಸುತ್ತಿದ್ದ ಮನೆಯಲ್ಲಿ. ಐವತ್ತರ ದಶಕದಲ್ಲೇ ಮಹಾರಾಣಿ ಕಾಲೇಜಿನಿಂದ ಪದವೀಧರೆಯಾಗಿದ್ದ ತಾಯಿ ಶ್ರೀಮತಿ ಗಿರಿಜಾ ಶಾಸ್ತ್ರಿಯ ವರ ಮಡಿಲಲ್ಲಿ ಅನಂತಕುಮಾರ್ ಮೊದಲ ಪಾಠ ಕಲಿತರು. ಶ್ರೀಮತಿ ಗಿರಿಜಾಶಾಸ್ತ್ರಿಯವರು ಸಮಾಜದ ಅನಿಷ್ಟಗಳ ಬಗ್ಗೆ ಸದಾ ಹೋರಾಡುತ್ತಿದ್ದ ಧೀರ ಚೈತನ್ಯ. ಅವರ ಈ ಎಣೆಯಿಲ್ಲದ ಸಮಾಜಮುಖಿ ಬದುಕಿನ ಬಿಸಿಲಲ್ಲಿ ಅನಂತಕುಮಾರ್ ಹದಿಹರೆಯಕ್ಕೆ ಬಂದರು. ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ತಂದೆ ಶ್ರೀ ನಾರಾಯಣ ಶಾಸ್ತ್ರಿಯವರಂತೂ ಆದರ್ಶದ ಬದುಕಿನ ನಿದರ್ಶನವಾಗಿದ್ದರು. ಸರ್ ಎಂ ವಿಶ್ವೇಶ್ವರಯ್ಯ, ಪ್ರಖ್ಯಾತ ಜ್ಯೋತಿಶಾಸ್ತ್ರಜ್ಞ ಶ್ರೀ ಬಿ.ವಿ. ರಾಮನ್‌ರವರಂಥ ಬಂಧುಗಳನ್ನು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿದ ಅನಂತಕುಮಾರ್ ಸಹಜವಾಗಿಯೇ ಈ ಎಲ್ಲ ಗುಣಗಳನ್ನು ಬೆಳೆಸಿಕೊಂಡರು.

ದಶಕಗಳಿಂದ ಭಗವದ್ಗೀತೆಯ ಬೋಧನೆಗಳನ್ನು ಪಠಿಸುವ,ಪಾಲಿಸುವ ಅನಂತಕುಮಾರ್, ಭಗವದ್ಗೀತೆಯ ಮೌಲ್ಯಶಿಕ್ಷಣದಲ್ಲಿ ನಂಬಿಕೆ ಇಟ್ಟಿದ್ದಾರೆ. ಈಗಲೂ ಪ್ರತಿದಿನ ಸಮಾಜಕಾಯಕಕ್ಕೆ ಹೊರಡುವ ಮುನ್ನ ಅವರು ಭಗವದ್ಗೀತೆಯ ಕೆಲವು ಚರಣಗಳನ್ನು ಮನಃಪೂರ್ವಕ ಪಠಿಸುತ್ತಾರೆ. ಇದು ಅವರ ಇಡೀ ದಿನವನ್ನು ಚೇತೋಹಾರಿಯಾಗಿಡುತ್ತದೆ.

ಅನಂತಕುಮಾರ್‌ರವರ ಧರ್ಮಪತ್ನಿ ತೇಜಸ್ವಿನಿ ಒಬ್ಬ ಸಾಫ್ಟ್‌ವೇರ್‌ ಇಂಜಿನಿಯರ್. ಅವರೀಗ ಸಮಾಜ ಸುಧಾರಣೆಯ ಸೋಶಿಯಲ್ ಇಂಜಿನಿಯರಿಂಗ್‌ನಲ್ಲಿ ಮಗ್ನರು. ಅನಂತಕುಮಾರ್‌ರವರ ತಾಯಿ ಶ್ರೀಮತಿ ಗಿರಿಜಾಶಾಸ್ತ್ರಿಯವರ ನೆನಪಿನಲ್ಲಿ ಸ್ಥಾಪನೆಯಾದ ಅದಮ್ಯ ಚೇತನ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ. ಅದಮ್ಯ ಚೇತನವೀಗ ಬೆಂಗಳೂರು, ಹುಬ್ಬಳ್ಳಿ, ಗುಲಬರ್ಗಾ ಮತ್ತು ರಾಜಸ್ಥಾನದ ಜೋಧಪುರ ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚು  ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿ ಮಾಡಿ ಸರಬರಾಜು ಮಾಡುತ್ತಿದೆ. ಶಾಲಾ ಮಕ್ಕಳು, ಅವರ ಪಾಲಕರು, ಮಹಿಳೆಯರ ನಡುವೆ ಹಲವಾರು ಯೋಜನೆಗಳ ಮೂಲಕ ಕಾರ್ಯನಿರತವಾಗಿರುವ ಅದಮ್ಯ ಚೇತನ ಇಂದು ದೇಶದ ಮುಂಚೂಣಿ ಸೇವಾಸಂಸ್ಥೆಯಾಗಿದೆ. ಅನಂತಕುಮಾರ್ ಈ ಸಂಸ್ಥೆಯ ಪ್ರಧಾನ ಪೋಷಕರು.

ಅನಂತಕುಮಾರ್ – ತೇಜಸ್ವಿನಿಯವರಿಗೆ ಇಬ್ಬರು ಹೆಣ್ಣುಮಕ್ಕಳು: ಐಶ್ವರ್ಯಾ ಮತ್ತು ವಿಜೇತ. ಇಬ್ಬರೂ ವಿದ್ಯಾಭ್ಯಾಸ ನಿರತರಾಗಿದ್ದಾರೆ.

Copyright © 2009 www.ananth.org All Rights Reserved. Powered by Dhyeya