ಹಸನ್ಮುಖಿ ಮತ್ತು ಸ್ನೇಹಭರಿತ ವ್ಯಕ್ತಿತ್ವ
ಅನಂತಕುಮಾರ್ ಮೊದಲು ಒಬ್ಬ ಸಹೃದಯ ಮಿತ್ರರು; ಆಮೇಲೆ ರಾಜಕಾರಣಿ ಎನ್ನುವವರೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಸಹ-ರಾಜಕಾರಣಿಗಳು, ಸಮಾಜದ ವಿವಿಧ ಗಣ್ಯರು, ತನ್ನ ವಿದ್ಯಾರ್ಥಿ ಚಳವಳಿಯ ದಿನಗಳ ಮಿತ್ರರು, ದೇಶ ವಿದೇಶದ ಉದ್ಯಮಿಗಳು, ಕುಟುಂಬದ ಸದಸ್ಯರು – ಯಾರೇ ಇರಲಿ, ಅವರನ್ನು ಹಸನ್ಮುಖಿಯಾಗಿ ನೋಡಿಕೊಳ್ಳುವುದು ಅನಂತಕುಮಾರ್‌ರವರ ಸಹಜ ನಡೆ. ಚಹಾಪಾನದ ಜೊತೆ ಮಾತುಕತೆ ನಡೆಸುವುದು ಅನಂತಕುಮಾರ್ ಶೈಲಿ.
ಅವರ ದಿನನಿತ್ಯದ ಮಾತುಕತೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಇತಿಹಾಸ ಹಾಸುಹೊಕ್ಕಾಗಿರುತ್ತದೆ. ಸಮಾಜ ಸುಧಾರಕರು, ಹೋರಾಟಗಾರರು, ಮುತ್ಸದ್ದಿಗಳು, ಆಡಳಿತಗಾರರು – ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಉಲ್ಲೇಖಕ್ಕೆ ಒಳಗಾಗುತ್ತಾರೆ. ಕ್ರಾಂತಿಕಾರಿ ಬಸವಣ್ಣನಿಂದ ಹಿಡಿದು ಇಸ್ರೇಲಿನ ಮೋಶೆ ದಯಾನ್‌ವರೆಗೆ, ಸ್ವಾತಂತ್ರ್ಯ ಸಮರದ ದಿನಗಳಿಂದ ಹಿಡಿದು ಜೆಪಿ ಚಳವಳಿಯವರೆಗೆ, – ಅನಂತಕುಮಾರ್ ಮಾತಿನ ಲಹರಿ ಹರಿಯುತ್ತದೆ. ಓದಿದ ನೂರಾರು ಪುಸ್ತಕಗಳ ಹತ್ತು ಹಲವು ಉಲ್ಲೇಖಗಳು ಅಸ್ಖಲಿತವಾಗಿ ಮೂಡುತ್ತವೆ. ಅವರೊಡನೆ ಅರ್ಧ ತಾಸು ಕಳೆದರೆ ಮೂರು ಪುಸ್ತಕಗಳನ್ನು ಓದಿದ ಅನುಭವವಾಗುವುದು ಉತ್ಪ್ರೇಕ್ಷೆಯೇನಲ್ಲ. ನಾಡಿನ ಬಗ್ಗೆ, ಪರಂಪರೆಯ ಬಗ್ಗೆ ಅವರಿಗೆ ಇರುವ ಅಪಾರ ನಂಬುಗೆ ಮತ್ತು ಆಶಾವಾದವನ್ನು ಅವರ ಮಾತುಕತೆಗಳು ಕ್ಷಣಕ್ಷಣಕ್ಕೂ ಬಿಂಬಿಸುತ್ತವೆ.
ನಗು ಮತ್ತು ಜೋಕ್ ಸ್ಫೋಟ – ಇದು ಅನಂತಕುಮಾರರ ಇನ್ನೊಂದು ಆಕರ್ಷಕ ಗುಣ. ಯಾವುದೇ ಸಂದರ್ಭಕ್ಕೂ ಅವರಲ್ಲಿ ಹತ್ತಾರು ಜೋಕ್‌ಗಳು ಸಿದ್ಧ. ತನಗೆ ಹಿಡಿಸಿದ ಜೋಕ್‌ಗಳನ್ನು ಅಭಿನಯಪೂರ್ವಕವಾಗಿ ತೋರಿಸಿಕೊಟ್ಟರಷ್ಟೇ ಅವರಿಗೆ ಸಮಾಧಾನ. ಕೇಳುವವರಿಗೆ ನಗೆಚಟಾಕಿಯ ರಸಾನುಭವ ಆಗಬೇಕು ಎಂಬ ಶ್ರದ್ಧೆ ಅವರಲ್ಲಿ ಸದಾ ಕಾಣುತ್ತದೆ. ರಾಜಕಾರಣದ ನಡುವೆ ನಗೆಬುಗ್ಗೆ ಚಿಮ್ಮಿಸುವ ಅವರ ಗುಣ ವಿಶಿಷ್ಟ, ಅಪರೂಪ. ಚಹಾದ ಜೋಡಿ ಚೂಡಾ ತರಿಸಿಕೊಂಡು ಇಂಥ ಕ್ಷಿಪ್ರ ನಗೆಗೋಷ್ಠಿಗಳನ್ನು ನಡೆಸುವುದು ಅನಂತಕುಮಾರ್‌ರ ಸ್ವಭಾವ. ದಿನವಿಡೀ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಂದಮೇಲೂ ಅವರಲ್ಲಿ ಈ ನಗಿಸುವ ಗುಣಕ್ಕೆ ದಣಿವಿಲ್ಲ; ತಾನೂ ಮನಸ್ಫೂರ್ತಿ ನಗಬೇಕು, ಜೊತೆಗಿದ್ದವರೂ ನಗುನಗುತ್ತ ಹೆಜ್ಜೆ ಹಾಕಬೇಕು ಎಂಬ ಪ್ರಾಮಾಣಿಕ ಭಾವ ಅವರಲ್ಲಿ ಎದ್ದು ಕಾಣುತ್ತದೆ. ಅದಕ್ಕೇ ‘ನಿಮ್ಮ ಅನಂತಕುಮಾರ್’ ಪತ್ರಿಕೆಯಲ್ಲಿ ಅವರ ‘ಹೇಳಿ-ಕೇಳಿ’ ಅಂಕಣ ಸುಪ್ರಸಿದ್ಧ. ಕೊಂಕಿ ಪ್ರಶ್ನೆಗಳಿಗೆ ಅಷ್ಟೇ ತೀಕ್ಷ್ಣವಾಗಿ, ವಿಶಿಷ್ಟವಾಗಿ ಅನಂತಕುಮಾರ್ ಉತ್ತರಿಸುತ್ತಾರೆ.
ಅನಂತಕುಮಾರ್ ನೆನಪಿನ ಬುತ್ತಿಯಂತೂ ಸದಾ ತಾಜಾ. ಅವರ ಅರವತ್ತರ ದಶಕದ ಬಾಲ್ಯವಿರಲಿ, ಎಪ್ಪತ್ತರ ದಶಕದ ವಿದ್ಯಾರ್ಥಿ ಹೋರಾಟವಿರಲಿ, ಎಂಬತ್ತರ ದಶಕದಲ್ಲಿ ಪಕ್ಷವನ್ನು ಕಟ್ಟಿದ ದಿನಗಳಿರಲಿ, ಯಾವುದೂ ಅವರ ಚಿತ್ತಫಲಕದಿಂದ ಮರೆಯಾಗುವುದೇ ಇಲ್ಲ. ಮತ್ತೆ ಮತ್ತೆ ಆ ದಿನಗಳನ್ನು ನೆನಪಿಸಿಕೊಂಡು ತನಗೆ ತಾನೇ ಸ್ಫೂರ್ತಿ ಪಡೆಯುತ್ತ, ಜೊತೆಗಿದ್ದವರಿಗೂ ಗತಕಾಲದ ಪರಿಶ್ರಮದ ದಿನಗಳನ್ನು ನೆನಪಿಸುತ್ತ ಅನಂತಕುಮಾರ್ ಮುಂದಿನ ದಿನಗಳ ಬಗ್ಗೆ ಉತ್ಸುಕರಾಗುತ್ತಾರೆ.
ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವಾಗ ಅನಂತಕುಮಾರ್ ಸಭಿಕರ ವಯೋಮಾನ, ಮಾನಸಿಕತೆಯನ್ನು ಅರಿತೇ ಮಾತನಾಡುತ್ತಾರೆ. ಸಭಾಂಗಣದಲ್ಲಿ ಮೂಡ್ ತರುವುದು ಹೇಗೆ ಎಂದು ಅವತ್ತು ಬೆಳಗ್ಗಿನಿಂದಲೇ ಯೋಚಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಸೂಕ್ತವಾದ ಮಾಹಿತಿ ಕೊಡುವ ಬಗ್ಗೆ ಮನನ ಮಾಡುತ್ತಾರೆ. ಅದಕ್ಕೇ ಅವರ ಭಾಷಣಗಳು ಶಿಸ್ತುಬದ್ಧವಾಗಿಯೂ ಸಭಿಕರ ಮನ ಸೆಳೆಯುತ್ತವೆ. ಅಂದಿನ ವಿಷಯಕ್ಕೆ ತಕ್ಕಂತೆ ಮುಖ್ಯಾಂಶಗಳನ್ನು ತನ್ನದೇ ಶೈಲಿಯಲ್ಲಿ ಪಟ್ಟಿ ಮಾಡುತ್ತ, ಸಭಿಕರನ್ನೂ ಒಳಗೊಳ್ಳುತ್ತ, ವೇದಿಕೆಯ ಮೇಲಿದ್ದವರ ಜೊತೆಗೂ ಸಂವಹನ ಮಾಡುತ್ತ ಅನಂತಕುಮಾರ್ ಕೊಟ್ಟ ಸಮಯದಲ್ಲಿ ಚೊಕ್ಕವಾಗಿ ಮಾತನಾಡುತ್ತಾರೆ.
ಸಂಸತ್ತಿನಲ್ಲಿ ಅನಂತಕುಮಾರ್ ಭಾಷಣ ಮಾಡುತ್ತಾರೆಂದರೆ ಅದರಲ್ಲಿ ಏನೋ ಸ್ಟಫ್ ಇದೆ ಎಂದೇ ಸಹ ಸಂಸದರು ಭಾವಿಸುತ್ತಾರೆ. ಅವರ ನಿರೀಕ್ಷೆಗಳು ಎಂದೂ ಸುಳ್ಳಾಗಿಲ್ಲ. ಕಾವೇರಿ ಜಲವಿವಾದವಿರಲಿ, ರಾಜ್ಯದ ಅಭಿವೃದ್ಧಿಯ ಸಂಗತಿಗಳಿರಲಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಬೇಕೆಂಬ ಬೇಡಿಕೆಯ ಮೇಲಿನ ಮಾತುಗಳಿರಲಿ, ಭಾವೋದ್ವೇಗವಿಲ್ಲದ, ನಾಡು ನುಡಿಗಾಗಿಯೇ ಕಟ್ಟಿಕೊಡುವ ಅನಂತಕುಮಾರ್‌ರವರ ಪಕ್ವ ಪ್ರತಿಪಾದನೆಗಳು ಅವರ ಮುತ್ಸದ್ದಿತನಕ್ಕೆ ನಿದರ್ಶನ. ರಾಷ್ಟ್ರೀಯ ಅಸ್ಮಿತೆಯ ಕುರಿತು ಎಂದೂ ರಾಜಿ ಮಾಡಿಕೊಳ್ಳದ, ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸದಾ ತವಕಿಸುವ ಅವರ ಗುಣಸ್ವಭಾವಗಳು ಪಕ್ಷಭೇದ ಮರೆತು ಪ್ರಶಂಸೆಗೆ ಒಳಗಾಗಿವೆ.
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅನಂತಕುಮಾರರನ್ನು ನೋಡಬೇಕು; ಅದೇ ಸಹಜತೆ, ಅದೇ ಸರಳತೆ ಮತ್ತು ಅದೇ ಹಸನ್ಮುಖತೆ. ಕಾರ್ಯಕರ್ತರೊಡನೆ ಮೆದು ಮಾತುಕತೆ, ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ಮತ್ತು ಹಠಾತ್ತನೆ ಚಿಮ್ಮಿಸುವ ಹೊಸ ಹೊಸ ವಾಸ್ತವಿಕ ಐಡಿಯಾಗಳು, ಮುಗ್ಧ ಮಕ್ಕಳೊಂದಿಗೆ ಮಕ್ಕಳಂತೆ ಬೆರೆಯುವ ಅಕ್ಕರೆಯ ಗುಣ – ಹೀಗೆ ಅನಂತಕುಮಾರ್ ತಮ್ಮ ವ್ಯಕ್ತಿತ್ವವನ್ನೇ ತೆರೆದಿಡುತ್ತಾರೆ. ಅದೇನು ಅವರಿಗೆ ಅಭಿನಯವಲ್ಲ; ಅನುಭವಜನ್ಯ ವರ್ತನೆ.
ಹೀಗೆ ರಾಜಕೀಯ, ಸಮಾಜಸೇವೆ, ಸಾಹಿತ್ಯ ಅಧ್ಯಯನ, ಮೆದುಹಾಸ್ಯ – ನಗೆಚಟಾಕಿ, ಸ್ನೇಹಭರಿತ ಮೆಲುಕು, ಸಂಘಟನಾ ದಿನಗಳ ಪ್ರೀತಿಪೂರ್ವಕ ಸ್ಮರಣೆ, ದೇಶದ ಮುಂದಿನ ದಿನಗಳ ಬಗ್ಗೆ ಸದಾ ಹುಮ್ಮಸ್ಸಿನ ಆಶಾವಾದ, – ಅನಂತಕುಮಾರ್ ನಿಜಕ್ಕೂ ನಮ್ಮ ನಡುವೆ ಇರುವ ನಮ್ಮೆಲ್ಲರ ಪ್ರಿಯ ಮಿತ್ರ.
ದೇಶ ಕಂಡ ಅಪರೂಪದ ರಾಜಕೀಯ ಮುತ್ಸದ್ದಿ.




